ಪ್ರಸನ್ನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ
ಭಕ್ತಾದಿಗಳು, ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಆದರದ ಮತ್ತು ಭಕ್ತಿಪೂರ್ವಕ ಸ್ವಾಗತ.
ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಮಣ್ಯದಲ್ಲಿರುವ ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಆಡಳಿತದಲ್ಲಿದ್ದು ಉತ್ತಮ ನಿರ್ವಹಣೆ ಹೊಂದಿದೆ. ಈ ದೇವಾಲಯದ ಸಕಲ ಧಾರ್ಮಿಕ ಕೈಂಕರ್ಯಗಳು ಶ್ರೀ ಸಂಪುಟ ನರಸಿಂಹಸ್ವಾಮಿ ಮಠದ ಪೂಜ್ಯ ಮಹಾಸ್ವಾಮಿಗಳಾದ ಶ್ರೀ. ಶ್ರೀ. ಶ್ರೀ ವಿದ್ಯಾ ಪ್ರಸನ್ನ ತೀರ್ಥಸ್ವಾಮಿಗಳ ಮಾರ್ಗದರ್ಶನದಲ್ಲಿ ನೆರವೇರುತ್ತಿವೆ.
ಸುಬ್ರಮಣ್ಯದಲ್ಲಿರುವ ಶ್ರೀ ಸಂಪುಟ ನರಸಿಂಹಸ್ವಾಮಿ ಮಠವು ಮಧ್ವ ತತ್ವ-ಸಿಧ್ಧಾಂತದ ದ್ವೈತ ಸಂಪ್ರದಾಯಕ್ಕೆ ಸೇರಿದ ಮಠವಾಗಿದೆ. ಶ್ರೀ ಮಧ್ವಾಚಾರ್ಯರು ಈ ಮಠವನ್ನು ಸ್ಥಾಪಿಸಿದ ಮಹಾಪುರುಷರು. ಒಮ್ಮೆ ಶ್ರೀ ಮಧ್ವಾಚಾರ್ಯರು ಬದರೀನಾಥಕ್ಕೆ ಭೇಟಿ ನೀಡಿದ ಸಂದರ್ಬದಲ್ಲಿ ಶ್ರೀ ವೇದವ್ಯಾಸರು ಗುರುಗಳಿಗೆ ಕೈತುಂಬ ವಿಷ್ಣು ಶಿಲೆಗಳನ್ನು ಕೊಡುಗೆಯಾಗಿ ನೀಡಿದರು. ಇಂತಹ ಶಿಲೆಗಳನ್ನು "ವ್ಯಾಸ ಮುಷ್ಟಿ" ಎಂದು ಕರೆಯಲಾಗುತ್ತದೆ. ವೇದವ್ಯಾಸರು ಹಲವಾರು ಸಾಲಿಗ್ರಾಮ ಶಿಲೆಗಳ ಜೊತೆಯಲ್ಲಿ ಪ್ರಮುಖವಾದ "ಶ್ರೀ ನರಸಿಂಹ ಸಾಲಿಗ್ರಾಮವನ್ನು" ನೀಡಿದರು. ಈ ನರಸಿಂಹ ಸಾಲಿಗ್ರಾಮವು ದೈವೀಕ ಗುಣವನ್ನು ಹೊಂದಿದ ಅತ್ಯಂತ ಶಕ್ತಿಶಾಲಿ ಶಿಲೆಯಾಗಿತ್ತು. ಶ್ರೀ ಮಧ್ವಾಚಾರ್ಯರು ಈ ಎಲ್ಲಾ ದೈವ ಶಿಲೆಗಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಅದಕ್ಕೆ ಮುದ್ರೆಯನ್ನಿರಿಸಿ ಜೋಪಾನ ಮಾಡಿ ಸುಬ್ರಮಣ್ಯಕ್ಕೆ ಕೊಂಡೊಯ್ದರು. ಈ ಪವಿತ್ರವಾದ ಪೆಟ್ಟಿಗೆಯನ್ನು "ಸಂಪುಟ" ಎಂದು ಕರೆಯುತ್ತಾರೆ. ಇಂದಿಗೂ ಇಲ್ಲಿನ ಸ್ವಾಮಿಗಳು ಈ ಸಂಪುಟವನ್ನು ಶ್ರಧ್ಧಾ-ಭಕ್ತಿಗಳಿಂದ ಪೂಜಿಸುತ್ತಿದ್ದಾರೆ. ಆದ್ದರಿಂದ ಈ ಮಠಕ್ಕೆ "ಶ್ರೀ ಸಂಪುಟ ನರಸಿಂಹ ಸ್ವಾಮಿ" ಮಠ ಎಂದು ಹೆಸರು ಬಂದಿದೆ.
ಮಧ್ವ ಧರ್ಮದ ಸಿಧ್ಧಾಂತ ಮತ್ತು ಸಂದೇಶಗಳನ್ನು ಪ್ರಚಾರ ಮಾಡುವುದಕ್ಕಾಗಿ ಶ್ರೀ ಮಠದ ೨೧ನೇ ಗುರುಗಳಾದ ಶ್ರೀ . ಶ್ರೀ. ಶ್ರೀ. ವಿಭುದೇಶ ತೀರ್ಥರು ಕೊಡಗಿನ ಕಡೆ ಪರ್ಯಟನೆಗೆ ಹೊರಟರು. ಇದೇ ಪ್ರವಾಸದ ಸಂದರ್ಬದಲ್ಲಿ ಕೊಡಗಿನ ಸೂರಲಬ್ಬಿಯಲ್ಲಿ ಅತ್ಯಂತ ಸುಂದರವಾದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯವನ್ನು ಸ್ಥಾಪಿಸಿದರು. ಅಲ್ಲಿಂದ ಮುಂದೆ ಪ್ರಯಾಣ ಹೊರಟ ಗುರುಗಳು ಕಾವೇರಿ ನದಿಯ ದಡದಲ್ಲಿರುವ ರಾಮನಾಥಪುರದಲ್ಲಿ ತಂಗಿದರು. ಅಲ್ಲಿ ನದಿಯ ತಟದಲ್ಲಿ ತಮ್ಮ ದೈನಂದಿನ ಪೂಜೆ-ಪುನಸ್ಕಾರಗಳನ್ನು ಪೂರೈಸಿ, ರಾತ್ರಿ ತಂಗಲು "ಸಂಕ್ರಾಂತಿ ಮಂಟಪ"ವನ್ನು ಆಶ್ರಯಿಸಿದರು. ಅಂದು ರಾತ್ರಿ ಮಲಗಿ ನಿದ್ರಿಸುತ್ತಿದ್ದ ಸಂದರ್ಬದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಯು ಗುರುಗಳ ಕನಸಿನಲ್ಲಿ ಕಾಣಿಸಿಕೊಂಡು ತನಗಾಗಿ ಒಂದು ದೇವಾಲಯವನ್ನು ಸ್ಥಾಪಿಸಬೇಕೆಂದು ಆಙ್ಞಾಪಿಸಿದನು. ಅದೇ ರಾತ್ರಿ ಭಗವಂತನು ಹೊಳೆನರಸೀಪುರದ ಪಾಳೇಗಾರರಾದ ಶ್ರೀ ನರಸಪ್ಪ ನಾಯಕರ ಕನಸಿನಲ್ಲಿ ಬಂದು ಶ್ರೀ ವಿಭುದೇಶ ತೀರ್ಥರು ಸ್ಥಾಪಿಸುವ ದೇವಾಲಯಕ್ಕೆ ಎಲ್ಲ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡಬೇಕೆಂದು ಆದೇಶಿಸಿದನು. ಹಾಗೆ ನಡೆದುಕೊಂಡಲ್ಲಿ ಅವರಿಗೆ ಒಂದು ಗಂಡು ಮಗುವನ್ನು ಅನುಗ್ರಹಿಸುತ್ತೇನೆಂದು ಅಪ್ಪಣೆ ಕೊಡಿಸಿದನು.
ಹೊಳೆನರಸೀಪುರದ ಪಾಳೇಗಾರರಾದ ಶ್ರೀ ನರಸಪ್ಪ ನಾಯಕರು ರಾಮನಾಥಪುರಕ್ಕೆ ಭೇಟಿ ನೀಡಿ ಶ್ರೀ ವಿಭುದೇಶ ತೀರ್ಥರ ಆಶೀರ್ವಾದ ಪಡೆದು ಅವರಿಗೆ ದೇವಾಲಯ ನಿರ್ಮಿಸಲು ಬೇಕಾದ ಸಕಲ ಸವಲತ್ತುಗಳನ್ನು ಒದಗಿಸಿ ಕೊಡುವುದಾಗಿ ಆಶ್ವಾಸನೆ ನೀಡಿದರು. ನಂತರ ಶ್ರೀ ವಿಭುದೇಶ ತೀರ್ಥರ ಆಶಯದಂತೆ ದೇವಾಲಯದ ನಿರ್ಮಾಣ ಕಾರ್ಯವನ್ನು ಪಾಳೇಗಾರರು ಆರಂಭಿಸಿದರು. ನಂತರ ಕೆಲವಾರು ವರ್ಷಗಳಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಯ ಆಙ್ಞೆಯಂತೆ ಭವ್ಯವಾದ ದೇವಾಲಯವು ರೂಪುಗೊಂಡು ಪೂರ್ಣವಾಯಿತು. ಪಾಳೇಗಾರರ ಈ ಸಾಧನೆಯನ್ನು ನೋಡಿದ ಶ್ರೀ ವಿಭುದೇಶ ತೀರ್ಥರು ಪ್ರಸನ್ನರಾದರು. ಆದ್ದರಿಂದ ದೇವಾಲಯಕ್ಕೆ "ಪ್ರಸನ್ನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯ" ಎಂದು ನಾಮಕರಣ ಮಾಡಿದರು. ಅದೇ ಸಮಯದಲ್ಲಿ ಶ್ರೀ ನರಸಪ್ಪ ನಾಯಕರಿಗೆ ಪುತ್ರ ಸಂತಾನ ಭಾಗ್ಯವು ಒದಗಿ ಬಂದಿತು. ಕೊನೆಗೆ ಶ್ರೀ ವಿಭುದೇಶ ತೀರ್ಥರು ಶ್ರೀ ಸುಬ್ರಮಣ್ಯ ಸ್ವಾಮಿಯ ಸೇವೆಯನ್ನು ಮಾಡುತ್ತಾ ತಮ್ಮ ಉಳಿದ ಜೀವನವನ್ನು ರಾಮನಾಥಪುರದಲ್ಲಿಯೇ ಕಳೆದು ಹರಿಪಾದವನ್ನು ಸೇರಿದರು.
ರಾಮನಾಥಪುರವು ಅತ್ಯಂತ ಪ್ರಸಿದ್ದ ಮತ್ತು ಪವಿತ್ರವಾದ ಯಾತ್ರಾ ಸ್ಥಳವಾಗಿದೆ. ಇಲ್ಲಿ ಸ್ಥಾಪಿಸಲಾಗಿರುವ ಶ್ರೀ ಸುಬ್ರಮಣ್ಯ ಸ್ವಾಮಿಯ ವಿಗ್ರಹವು ಕಪ್ಪು ಬಣ್ಣದ ಸಾಲಿಗ್ರಾಮ ಶಿಲೆಯಿಂದ ಕೆತ್ತಲ್ಪಟ್ಟಿದೆ. ಈ ವಿಗ್ರಹದಲ್ಲಿ ೭ ನಾಗರ ಹೆಡೆಗಳಿವೆ. ಭಕ್ತಾದಿಗಳು ಇಲ್ಲಿ ನಡೆಸಲಾಗುವ ನಾಗ ಪ್ರತಿಷ್ಟೆ, ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಸೇವೆಗಳನ್ನು ನೆರವೇರಿಸಿ ತಮ್ಮ ಕಷ್ಟ-ಕಾರ್ಪಣ್ಯಗಳಿಗೆ ನೆಮ್ಮದಿ ಮತ್ತು ಶಾಂತಿಯ ಪರಿಹಾರವನ್ನು ಕಂಡುಕೊಂಡಿದ್ದಾರೆ. ಪ್ರಮುಖವಾಗಿ ಭಕ್ತಾದಿಗಳು ತಮ್ಮ ಸಂತಾನ ಹೀನತೆ, ಸರ್ಪದೋಷ, ಚರ್ಮ ವ್ಯಾಧಿ, ಇನ್ನೂ ಮುಂತಾದ ತೊಂದರೆಗಳಿಗೆ ಹರಕೆ ತೀರಿಸುತ್ತಾರೆ. ಶ್ರೀ ಸುಬ್ರಮಣ್ಯ ಸ್ವಾಮಿಯ ಹುತ್ತದಿಂದ ತೆಗೆದ "ಮೃತ್ತಿಕೆ"ಯೇ ಇಲ್ಲಿಯ ಪ್ರಧಾನ ಪ್ರಸಾದವಾಗಿದೆ. ಈ ದೇವಾಲಯದ ಪ್ರಾಂಗಣದಲ್ಲಿ ಶ್ರೀ ಹೊಸಳಿಗಮ್ಮ, ಶ್ರೀ ಲಕ್ಶ್ಮಿ ನರಸಿಂಹ ಸ್ವಾಮಿ ಮುಂತಾದ ದೇವರುಗಳ ಸನ್ನಿದಿಗಳಿವೆ.
ಶ್ರೀ ಸುಬ್ರಮಣ್ಯ ಸ್ವಾಮಿಯು ಭಕ್ತರ ಜನ್ಮ-ಜನ್ಮಾಂತರದ ಪಾಪ ಕರ್ಮಗಳನ್ನು ಕಳೆದು, ಅವರ ನೋವುಗಳನ್ನು ಕೊನೆಗಾಣಿಸುವ ಶಕ್ತಿಯಾಗಿದ್ದಾನೆ. ಅವನು ನಿಷ್ಠೆ, ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಪೂಜಿಸುವ ಭಕ್ತರ ಅಶೋತ್ತರಗಳನ್ನು ಸಕಲ ರೀತಿಯಿಂದಲೂ ಈಡೇರಿಸುತ್ತಾನೆ. |